Sunday, September 14, 2008

ಕುಂವೀ ಸಿಟ್ಟು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುಸರಸ್ಕೃತ ಕುಂ.ವೀರಭದ್ರಪ್ಪ ಬಯಲು ಸೀಮೆ ಜನರಿಗೆ ಚಿರಪರಿಚಿತರು. ಬಳ್ಳಾರಿಯ ಹಳ್ಳಿಯೊಂದರಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುತ್ತಲೇ ಅನೇಕ ಕಥೆ, ಕಾದಂಬರಿ ಬರೆದಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಕಥನ ಶೈಲಿ, ಬರಹದಲ್ಲಿ ಇಣುಕುವ ಹಳ್ಳಿ ಬದುಕಿನ ಚಿತ್ರಣ, ಪುಸ್ತಕದ ಹೆಸರು ಎಲ್ಲಾ ವಿಶಿಷ್ಟ.
ಎರಡು ವರ್ಷಗಳ ಹಿಂದಿನ ಮಾತು. ಆ ದಿನ ಕುಂಬಾರರ ಸಂಘ ತಮ್ಮ ಜನಾಂಗದವರಿಗೆ ಮುರುಘಾಮಠ ನೀಡಿರುವ ಗುರುಪೀಠದ ಆಹ್ವಾನದ ಲಾಭ ನಷ್ಟಗಳ ಬಗ್ಗೆ ಏಕಾಭಿಪ್ರಾಯಕ್ಕೆ ಬರಲು ಸಭೆ ಕರೆದಿತ್ತು.ಕುಂ.ವೀ ಅವರನ್ನೂ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು.
ಕುಂ.ವೀ ಭಾಷಣದುದ್ದಕ್ಕೂ ಗುರುಪೀಠದಿಂದ ಆಗುವ ನಷ್ಟಗಳನ್ನು ನಿದರ್ಶನದ ಮೂಲಕ ಪಟ್ಟಿಮಾಡುತ್ತಿದ್ದರು. ಅವರ ಜತೆ ವೇದಿಕೆ ಹಂಚಿಕೊಂಡಿದ್ದ ಕೆಲವು ಯುವ ಮುಖಂಡರು ಕೂತಲ್ಲೇ ಕುಶಲೋಪರಿ ವಿಚಾರಿಸುತ್ತಿದ್ದರು. ಕುಂ.ವೀ ಅವರಿಗೆ ಕಿರಿಕಿರಿಯಾಯಿತು.
ಹೇಳಿ ಕೇಳಿ ಅವರು ಹಳ್ಳಿ ಮೇಷ್ಟ್ರು. ತರಗತಿಯಲ್ಲಿ ತಾನು ಮಾತನಾಡುವಾಗ ಕೂತವರ ಮಧ್ಯೆ ಪಿಸು, ಪಿಸು ಧ್ವನಿ ಕೇಳಿದರೆ ಸುಮ್ಮನೆ ಬಿಟ್ಟಾರೆಯೇ. ಹಾಗೇ ಆಯ್ತು.
ಕುಂ.ವೀ ಮೈಕ್ ಹಿಡಿದುಕೊಂಡೇ ಒಂದಾ ನಾನು ಮಾತನಾಡ್ಬೇಕು.ಇಲ್ಲಾ ನೀವು ಮಾತನಾಡಿ... ನಾನು ಮಾತನಾಡುತ್ತಿರುವ ವಿಷಯದ ಗಂಭೀರತೆ ಅರಿತುಕೊಳ್ಳಿ ಎಂದು ನೂರಾರು ಸಭಿಕರ ಮುಂದೆ ಆ ಯುವ ಮುಖಂಡರಿಗೆ ಜಾಡಿಸಿಯೇಬಿಟ್ಟರು. ಕುಂವೀ ಬರಹವನ್ನಷ್ಟೇ ಓದಿದ್ದ ಸಭಿಕರಿಗೆ ಆದಿನ ಅವರ ಸಿಟ್ಟಿನ ಪರಿಚಯವೂ ಆಯ್ತು.