Friday, August 29, 2008

ತರಾಸುಗೆ ಮರುಜನ್ಮ ನೀಡಿದ ಸನ್ಮಾನ

ಖ್ಯಾತ ಸಾಹಿತಿ ತರಾಸು ಅವರಿಗೂ ಗುಂಡು, ಸಿಗರೇಟಿಗೂ ಬಿಡಿಸಲಾಗದ ನಂಟು.
ಮೊದಲೇ ನರದೌರ್ಬಲ್ಯ, ಇದರ ಜತೆಗೆ ಗುಂಡು, ಸಿಗರೇಟ್ ಸೇರಿ ತರಾಸು ಅವರನ್ನು ಇನ್ನಷ್ಟು ಬೆಂಡಾಗಿಸಿತ್ತು. ಗುಂಡಿನ ಸಹವಾಸ ಬಿಟ್ಬಿಡೋಕಾಗಲ್ವಾ...ಅಂಥ ಯಾರು ಎಷ್ಟೇ ಬುದ್ಧಿವಾದ ಹೇಳಿದ್ರೂ ನಕ್ಕು ಸುಮ್ಮನಾಗುತ್ತಿದ್ದರಷ್ಟೆ.
ಹೀಗೇ ಒಮ್ಮೆ ತರಾಸು ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದಲ್ಲಿ ಚಿಕಿತ್ಸೆಗಾಗಿ ಸೇರಿಕೊಂಡಿದ್ದರು. ಒಂದೆಡೆ ಚಿಕಿತ್ಸೆಯಾದರೆ ಇನ್ನೊಂದೆಡೆ ಪೆಗ್ ಏರುತ್ತಲೇ ಇತ್ತು. ಆಶ್ರಮದ ರಾಘವೇಂದ್ರ ಸ್ವಾಮೀಜಿ ಹೇಳಿದ್ರೂ ಹುಹುಂ... ಪೆಗ್ ಕೆಳಗಿಳಿಯಲೇ ಇಲ್ಲ. ಕೊನೆಗೆ ತಾವೇ ಆಶ್ರಮದಿಂದ ಹೊರಬಂದರು.
ಇದೇ ಸಂದರ್ಭದಲ್ಲಿ ತರಾಸು ಅವರ ಅಭಿಮಾನಿ ಬಳಗದ ಕೆಲವರ ಮನಸ್ಸಿನಲ್ಲಿ ನಾವ್ಯಾಕೆ ತರಾಸು ಅವರನ್ನು ಕರೆಸಿ ಸನ್ಮಾನ ಮಾಡಬಾರ್‍ದು ಅನ್ನೋ ಯೋಚನೆ ತಲೆಗೆ ಹತ್ತಿತು ನೋಡಿ. ಕೆಲವೇ ದಿನಗಳಲ್ಲಿ ಹಾರ ತುರಾಯಿ ರೆಡಿ ಮಾಡಿಯೇ ಬಿಟ್ಟರು. ಅವತ್ತು ವೇದಿಕೆ ಮೇಲಿದ್ದ ತರಾಸುಗೆ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಕಂಡು ಹಿಗ್ಗೋ ಹಿಗ್ಗು. ಇವರಿಗೋಸ್ಕರವಾದ್ರೂ ನಾನು ಏನಾದ್ರು ಬರೆಯಲೇಬೇಕು ಎಂಬ ತುಡಿತ ಅವರ ಮನದ ಮೂಲೆಯಲ್ಲಿ ಚಿಗಿತುಕೊಂಡಿತು. ಇದೇ ಹಿಗ್ಗಿನಲ್ಲಿ ಮುಂದೆ ತಾವು ಚಿತ್ರದುರ್ಗದ ಕೊನೇ ರಾಜ ಮದಕರಿನಾಯಕನ ಬಗ್ಗೆ ಬರೆಯುವುದಾಗಿ ಘೋಷಿಸಿಯೇ ಬಿಟ್ಟರು.
ಇದನ್ನು ಕೇಳಿ ಕೆಲವರು ಮೀಸೆಯಡಿಯೇ ನಕ್ಕಿದ್ದುಂಟು. ಪೆಗ್ಗು, ಅನಾರೋಗ್ಯದ ನಡುವೆ ಸಿಕ್ಕು ನಡುಗುತ್ತಿರುವ ವ್ಯಕ್ತಿ ಅದ್ಹೇಗೆ ಪೆನ್ನು ಕೈಗೆತ್ತಿಕೊಂಡಾನು ಅಂಥ ಅವರಿವರು ಆಡಿಕೊಂಡಿದ್ರು.
ನಂತರ ನಡೆದದ್ದು ಇತಿಹಾಸ. ಮದಕರಿ ನಾಯಕನ ಕುರಿತು ಬರೆದ ದುರ್ಗಾಸ್ತಮಾನ ತರಾಸುಗೆ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಿಲ್ಲದ ಖ್ಯಾತಿ ತಂದುಕೊಟ್ಟಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಒಲಿಯಿತು. ದುರ್ಗದ ಇತಿಹಾಸ ನಾಡಿನ ಮೂಲೆಮೂಲೆಗೂ ಪಸರಿಸಿತು. ಅಂತಹದ್ದೊಂದು ಕಾದಂಬರಿ ಬಹುಷಃ ಯಾರೂ ಬರೆದಿರಲಿಕ್ಕಿಲ್ಲ, ಬರೆಯಲೂ ಸಾಧ್ಯವಿಲ್ಲ. ತರಾಸು ಆ ಕಾದಂಬರಿ ನಂತರ ಲವಲವಿಕೆಯ ಗೂಡಾಗಿದ್ದರು ಅನ್ನೋದು ವಿಶೇಷ. ಇದಕ್ಕೆ ಕೊನೇವರೆಗೂ ಅವರ ಕೈ ಹಿಡಿದ ಗುಂಡು ಕಾರಣವಾಗಿತ್ತಾ ಕೇಳ್ಬೇಡಿ...
ತರಾಸು ಅಭಿಮಾನಿಗಳೆಲ್ಲಾ ಅವರ ಮರುಜನ್ಮಕ್ಕೆ ಕಾರಣವಾದ ಆ ಸನ್ಮಾನ ಸಮಾರಂಭಕ್ಕೆ ಟ್ಯಾಂಕ್ಸ್ ಹೇಳಲೇ ಬೇಕು.( ವೆಂಕಣ್ಣಾಚಾರ್ ಹೇಳಿದಂತೆ..)

Friday, August 22, 2008

ಐ ಲವ್ ಟು ವಾಕ್ ಇನ್ ದಿ ರೈನ್

ಐ ಲವ್ ಟು ವಾಕ್ ಇನ್ ದಿ ರೈನ್ ಬಿಕಾಸ್ ನೋಬಡಿ ಕ್ಯಾನ್ ಸೀ ಮಿ ಕ್ರೈಯಿಂಗ್‘ - ಚಾರ್ಲಿ ಚಾಪ್ಲಿನ್
ಎಷ್ಟು ಅದ್ಭುತವಾಗಿದೆಯಲ್ಲಾ ಈ ಸಾಲು. ಚಾಪ್ಲಿನ್ ಎಂಬ ಸಿನಿಮಾಂತ್ರಿಕ ನಗುನಗುತ್ತಲೇ ಜನರ ಹೃದಯ ತಲಪಿದವನು. ನಗುತ್ತಲೇ ನೋವು ಬಿಚ್ಚಿಟ್ಟವನು.
ಸಮಾಜ, ಕೈಗಾರಿಕೀಕರಣ, ಆಸೆ ಇವುಗಳನ್ನೆಲ್ಲಾ ವಿಡಂಬನೆ ಮಾಡುತ್ತಲೇ ಅದರಿಂದಾಗುವ ಅನಾಹುತ, ನೋವಿನ ಪರಿಚಯ ಮಾಡಿಕೊಟ್ಟ ಚಾಪ್ಲಿನ್ ನನಗಂತೂ ಅದ್ಭುತ ವ್ಯಕ್ತಿ. ಅವನು ನೆನಪಾದಗಲೆಲ್ಲಾ ನನ್ನ ಮುಂದೆ ಬರುವುದೇ ಈ ಸಾಲು.
ನಮ್ಮ ನಡುವೆ ಎರಡು ರೀತಿಯ ಜನರಿರುತ್ತಾರೆ. ಕೆಲವರು ಸಣ್ಣ ನೋವಿಗೂ ನಾಲ್ಕು ಕಣ್ಣೀರು ಹಾಕಿ,ಆತ್ಮೀಯರ ಹೆಗಲ ಮೇಲೆ ತಲೆ ಇಟ್ಟು ಒಂದಷ್ಟು ಸಮಯ ಕಣ್ಣು ಮುಚ್ಚಿಕೊಂಡು ಹಗುರವಾಗುವವರು.ಇನ್ನು ಕೆಲವರಿರುತ್ತಾರೆ. ಅವರಿಗೆ ಖುಷಿಯನ್ನಷ್ಟೇ ಹಂಚಿಗೊತ್ತು.ನೋವನ್ನು ಅವಡುಗಚ್ಚಿ ನುಂಗಿ ಜಗತ್ತಿನ ಮುಂದೆ ನಗುವಿನ ಮುಖವಾಡ ಹಾಕಿಕೊಳ್ಳುವ ಜಾಯಮಾನ ಇವರದ್ದು.
ಮೊದಲ ಗುಂಪಿಗೆ ಸೇರಿದವರು ಪುಣ್ಯವಂತರು ಅನ್ನಲೇ ಬೇಕು. ನೋವು ಹಂಚಿಕೊಳ್ಳಲು ಯಾರಾದರೂ ಅವರ ಪಕ್ಕಕ್ಕಿರುತ್ತಾರೆ. ಇನ್ನು ಕೆಲವರಿಗೆ ಆ ಭಾಗ್ಯ ಇಲ್ಲ. ತಮ್ಮ ನೋವನ್ನು ಹೇಳಿಕೊಂಡು ಬಯಲಾಗುವಷ್ಟು ಆತ್ಮೀಯರು ಅವರಿಗಿರುವುದಿಲ್ಲ ಅಥವಾ ಅವರಿಗೆ ತಮ್ಮ ನೋವು ಹಂಚಿಕೊಳ್ಳುವ ಇಷ್ಟ ಇರುವುದಿಲ್ಲ. ಈ ಗುಂಪಿಗೆ ಸೇರಿದವರಿಗಷ್ಟೇ ಗೊತ್ತು ಮೇಲಿನ ಸಾಲಿನ ಮಹತ್ವ.

Wednesday, August 13, 2008

ಇವರು ಗೆಲ್ಲುವ ಕುದುರೆ ಬೆನ್ನುತಟ್ಟುವವರು

ಬೀಜಿಂಗ್ ಒಲಂಪಿಕ್ಸ್‌ನಲ್ಲಿ ಚಿನ್ನ ತಂದುಕೊಟ್ಟು ಇಡೀ ದೇಶವನ್ನೇ ಸಂಭ್ರಮದಲ್ಲಿ ತೇಲಿಸಿದ ಬಿಂದ್ರಾಸಾಧನೆ ನಿಜಕ್ಕೂ ಶ್ಲಾಘನೀಯ ನೂರು ಕೋಟಿ ಜನಸಂಖ್ಯೆಯ ಭಾರತಕ್ಕೆ ಒಲಂಪಿಕ್ಸ್‌ನಲ್ಲಿ ಕಾಡುತ್ತಿದ್ದ ಚಿನ್ನದ ಬರ ಕೊನೆಗೂ ಬಿಂದ್ರಾ ಅವರಿಂದ ಕೊನೆಗೊಂಡಿದೆ. ಇವರ ಈ ಸಾಧನೆಗೆ ಭಾರತದ ಪ್ರತಿಯೊಬ್ಬ ಕ್ರೀಡಾಸಕ್ತರೂ ಗೌರವ ಸಲ್ಲಿಸಲೇಬೇಕು. ಸಲ್ಲಿಸಿದ್ದಾರೆ ಕೂಡ.
ಚೀನಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಬಿಂದ್ರಾ ಸಾಧನೆ ಮೆಚ್ಚಿ ದೇಶದ ನಾನಾ ರಾಜ್ಯಗಳು ಬಹುಮಾನ ಘೋಷಿಸಿವೆ. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿಲ್ಲ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ೧೦ಲಕ್ಷ ಬಹುಮಾನ ಪ್ರಕಟಿಸಿ ತಮ್ಮ ಕ್ರೀಡಾ ಸೂರ್ತಿ ಮೆರೆದಿದ್ದಾರೆ.
ಈ ಸುದ್ದಿ ಮರುದಿನ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗುವ ಹೊತ್ತಿಗೆ ವಾಣಿಜ್ಯ ನಗರಿ ದಾವಣಗೆರೆಯ ಪತ್ರಿಕಾಭವನದಲ್ಲಿ ಏಷ್ಯನ್ ಕ್ರೆಡಿಟ್ ಕರಾಟೆ ಚಾಂಪಿಯನ್‌ಷಿಪ್‌ಗೆ ಆಯ್ಕೆ ಆಗಿರುವ ಐ.ಕೆ.ಹೀನಾಎಂಬ ಹುಡುಗಿ ಕ್ರೀಡಾಭಿಮಾನಿಗಳ ಸಹಾಯಕ್ಕಾಗಿ ಎದುರುನೋಡುತ್ತಿದ್ದಳು. ಮಲೇಷ್ಯಾದಲ್ಲಿ ನಡೆಯಲಿರುವ ಈ ಸರ್ದೆಯಲ್ಲಿ ಭಾಗವಹಿಸಲು ಕನಿಷ್ಠ ಅಂದ್ರೂ ೧.೨೫ ಲಕ್ಷ ರೂ. ಖರ್ಚು ತಗಲುತ್ತದೆ. ಅಷ್ಟು ವೆಚ್ಚ ಮಾಡಿ ಸರ್ದೆಯಲ್ಲಿ ಪಾಲ್ಗೊಳ್ಳುವ ಶಕ್ತಿ ಅವಳಲ್ಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಆಕೆ ಮಾಧ್ಯಮದ ಮುಂದೆ ಬರಬೇಕಾಯಿತು. ಕಳೆದ ವರ್ಷ ಇದೇ ಜಿಲ್ಲೆಯಿಂದ ಟರ್ಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದ ರೇಖಾರೆಡ್ಡಿ ಗೋಳು ಇದಕ್ಕಿಂತ ಭಿನ್ನವಾಗಿರಲಿಲ್ಲ.‘ಸರಕಾರ ಸ್ಪರ್ಧೆಗೇನೂ ಆಯ್ಕೆ ಮಾಡಿಕಳುಹಿಸುತ್ತದೆ. ಆದರೆ, ಹಣಕಾಸು ಸಹಕಾರ ನೀಡುವುದಿಲ್ಲ. ಹೀಗಾದರೆ ನಮ್ಮಂಥ ಮಧ್ಯಮವರ್ಗವರು ಕ್ರೀಡೆಯಲ್ಲಿ ಮುಂದೆ ಬರುವುದಾದರೂ ಹೇಗೆ ಎಂದು ಆಕೆ ತನ್ನ ಅಸಮಾಧಾನ ತೋಡಿಕೊಂಡಿದ್ದಳು. ಈಗ ಗೋಗರೆಯುವ ಸರದಿ ಹೀನಾಳದ್ದು ಅಷ್ಟೆ. ಇದು ನಿಲ್ಲುವ ಹಾಗೆ ಕಾಣುವುದಿಲ್ಲ.
ಹೀನಾ ಪ್ರಥಮ ಪಿಯು ವಿದ್ಯಾರ್ಥಿನಿ. ರಾಜ್ಯ,ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ ಬಾಚಿಕೊಂಡಿರುವ ಹೀನಾಗೆ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಅರ್ಹವಾಗಿಯೇ ದಕ್ಕಿದೆ. ಆದರೆ, ಮಲೇಷ್ಯಾಕ್ಕೆ ಹೋಗಬೇಕಾದರೆ ಪಾಸ್‌ಫೋರ್ಟ್,ಕೋಚ್ ಅದೂ ಇದೂ ಅಂದ್ರೂ ಆರಂಕಿ ದಾಟುವ ಖರ್ಚು ಭರಿಸುವುದು ಸಾಧ್ಯವೆ?
ಬಿಂದ್ರಾಗೆ ೧೦ ಲಕ್ಷ ರೂ. ಘೋಷಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕ್ರೀಡಾಸೂರ್ತಿ ಮೆರೆದಿದ್ದಾರೆ ನಿಜ. ಆದರೆ, ಅದೇ ಸ್ಪೂರ್ತಿ ಹಣವಿಲ್ಲದೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವ ರಾಜ್ಯದ ನೂರಾರು ಪ್ರತಿಭಾವಂತ ಕ್ರೀಡಾಪಟುಗಳ ವಿಷಯದಲ್ಲಿ ಯಾಕೆ ಕಾಣಿಸಿಕೊಳ್ಳುವುದಿಲ್ಲ.
ಗೆಲ್ಲುವ ಕುದುರೆ ಬೆನ್ನು ತಟ್ಟುವವರು ನೂರಾರು ಜನ ಸಿಗುತ್ತಾರೆ? ಆದ್ರೆ...

Monday, August 4, 2008

ಇದೆಂಥ ಸಾವು ಅನ್ನಬಾರದು ಅಷ್ಟೆ

ಪ್ರಿಯೆ, ನಿನ್ನನ್ನು ನಲ್ಲೆ,ಗಿಲ್ಲೆ ಅಂಥಾ... ಮುದ್ದು ಮುದ್ದಾಗಿ ಕರೆದು ಮುದ್ದಿಸುವಷ್ಟು ಆತ್ಮೀಯತೆ ಈಗ ನಮ್ಮ ನಡುವೆ ಉಳಿದಿಲ್ಲ.ಆದ್ರೂ ಒಂದು ಪ್ರಶ್ನೆಯನ್ನಂತು ನಿನ್ನಲ್ಲಿ ಕೇಳಲೇ ಬೇಕು. ಅದಕ್ಕೆ ಈ ಪತ್ರ.
ಚಿನ್ನಾ, ಪ್ರೀತಿ ಸಾವು ಬೇಡುತ್ತಾ...
ಈ ಪ್ರಶ್ನೆಯನ್ನು ನಾನು ನನ್ನ ಕೆಲವು ಗೆಳೆಯರಲ್ಲೂ ಕೇಳಿದ್ದೆ. ಕೆಲವರು ಒಂದಾ ಇವನಿಗೆ ತಲೆ ಕೆಟ್ಟಿರಬೇಕು ಅಂದ್ರೆ, ಇನ್ನು ಕೆಲವರು ಛೆ...ಹಾಗೇನಾದ್ರೂ ಉಂಟಾ..ಪ್ರೀತಿ ಸಾವನ್ನೂ ಗೆಲ್ಲಬಲ್ಲುದು ಎನ್ನುವ ಉತ್ತರ ಕೊಟ್ರು.
ಆದರೆ, ನಿನಗೊಂದು ವಿಷಯ ಗೊತ್ತಾ ನನ್ನ ವಿಷಯದಲ್ಲಿ ಈ ಮಾತು ನಿಜವಾಗ್ತಿದೆ ಕಣೆ. ನಿನ್ನ ನೆನಪಲ್ಲೇ ಕೊರಗಿ ರೋಗಿಯಾಗಿ ಸಾವಿನ ಬಾಗಿಲ ಹತ್ರ ನಿಂತಿದ್ದೀನಿ. ಸಾವಿನ ಬಾಗಿಲು ನಾನಾಗೇ ತೆರೀತೇನಾ, ಅದಾಗಿಯೇ ತೆರಿಯುತ್ತಾ ಗೊತ್ತಿಲ್ಲ. ಆದರೆ ಆ ಬಾಗಿಲ ಹತ್ತಿರ ಕೈಹಿಡಿದು ಕರೆದುಕೊಂಡು ಬಂದದ್ದು ಆ ನಿನ್ನ ಬಟ್ಟಲು ಕಣ್ಣುಗಳೇ ಕಣೇ.
ಬೇಸರ ಆಯ್ತಾ...ನಾನು ನಿನ್ನ ಮೇಲಿನ ಕೋಪದಿಂದ ಈ ಮಾತು ಹೇಳ್ತಿಲ್ಲ ಕಣೆ. ನಾವು ಜತೆಗೆ ಕೂತು ಕಣ್ಣಲ್ಲಿ ಕಣ್ಣಿಟ್ಟು ಕಟ್ಟಿಕೊಂಡಿದ್ದೆವಲ್ಲಾ ನೂರಾರು ಕನಸುಗಳು, ಅವೇ ಇವತ್ತು ಕೊಲ್ತಿದೆ. ಬೇಸರವಾದ್ರೆ ಕ್ಷಮಿಸಿಬಿಡು. ನೀನ್ಯಾವತ್ತೂ ನನ್ನ ಸಣ್ಣ ತಪ್ಪನ್ನೂ ಕ್ಷಮಿಸಿದವಳಲ್ಲ.ಯಾವಾಗ್ಲೂ ನನ್ನ ಜತೆ ಸಿಡಿಮಿಡಿಯಾಗೇ ಇರ್‍ತಿದ್ದೆ, ಈಗ ನಾನಿಲ್ಲ. ನೀನು ಹೇಗಿರ್‍ತೀಯಾ ಅಂಥಾ ಒಮ್ಮೊಮ್ಮೆ ನೋಡಬೇಕೆಸುತ್ತೆ. ಕ್ಷಮಿಸು, ಆ ತಪ್ಪು ಮಾಡೋದಿಲ್ಲ. ನಿನ್ನ ಯಾವ ದಾರಿಗೂ ಅಡ್ಡ ಬರೋದಿಲ್ಲ.
ನಾನು ಸೈಕಾಲಜಿ ಓದಿಲ್ಲ. ಪ್ರ್ಯಾಕ್ಟಿಕಲ್ ಲೈಫ್ ಅಂದ್ರೆ ಹೇಗಿರುತ್ತೆ ಅಂತಾ ತಿಳ್ಕೊಂಡಿಲ್ಲ. ಚಿಕ್ಕವನಿದ್ದಾಗಿನಿಂದ ನನಗೆ ಗೊತ್ತಿರೋದು ಪ್ರೀತಿಸೋದಷ್ಟೆ. ನಾನು ಇಷ್ಟು ದಿನ ಮಾಡಿದ್ದು ಅದನ್ನೇ. ನೀನೇನೋ ಅರ್ಥವಿಲ್ಲದ ಪ್ರ್ಯಾಕ್ಟಿಕಲ್, ಗೀಕ್ಟಿಕಲ್ ಅಂಥಾ ದೂರ ಹೋಗಿಬಿಟ್ಟೆಯಲ್ಲಾ... ನೇರವಾಗಿ ಒಂದು ಪ್ರಶ್ನೆ ಕೇಳ್ತೇನೆ. ಬೇಜಾರು ಮಾಡ್ಕೋಬೇಡ. ಪ್ರಾಕ್ಟಿಕಲ್ ಲೈಫ್ ಅಂದ್ರೆ ಏನು. ಅದು ಅವಕಾಶವಾದಾನ ಅಥವಾ ಬದುಕುವ ಕಲೇನಾ? ನೀನು ಅದೇ ಲೈಫ್ ಅಂಥಾ ಹೇಳಿದ್ರೆ ನಿನ್ಗೆ ನನ್ನದೊಂದು ಸಣ್ಣ ಪ್ರಶ್ನೆ.( ಕ್ಷಮಿಸು ಈಗಾಗಬೇಕೆಂದು ಮನಸಿಂದ ಬಯಸೋ ವ್ಯಕ್ತಿ ನಾನಲ್ಲ) ನೀನು ನಿನ್ನ ತಂದೆನೋ, ತಾಯೀನೊ ತುಂಬಾ ಪ್ರೀತಿಸ್ತೀಯಾ ಅಂತಿಟ್ಕೋ ಅವರು ತೀರಿಕೊಂಡಾಗ ಒಂದೇ ಒಂದು ಕಣ್ಣಹನಿ ಸುರೀಸದೇ ಇರಬಲ್ಲೆಯಾ? ಹಾಗೇನಾದ್ರು ಆದ್ರೆ ನಾನು ಖಂಡಿತ ನಿನ್ನ ಪ್ರ್ಯಾಕ್ಟಿಕಲ್ ಥಿಯರಿ ಒಪ್ಕೋತೀನಿ. ಈ ಕುಡಿತ, ಸಿಗರೇಟು ಎಲ್ಲಾ ಬಿಟ್ಟುಬಿಡ್ತೀನಿ. ಹೇಳು ನಿನ್ನಿಂದ ಸಾಧ್ಯನಾ? ಯಾಕೆ ಸುಮ್ನೆ ಪ್ರ್ಯಾಕ್ಟಿಕಲ್ ಅಂಥಾ ಇಲ್ಲದ ಥಿಯರಿಯನ್ನು ನನ್ನ ಮಂದೆ ಇಟ್ಟು ಸುಳ್ಳು ಹೇಳ್ತೀಯಾ.
ಒಂದು ಮಾತಂತು ನಿಜಾ ಕಣೆ. ನಾನು ಸತ್ರೂ ನಗ್ತಲೇ ಸಾಯ್ಬೇಕು ಅಂತಾ ನಿರ್ಧರಿಸಿದ್ದೇನೆ. ಸಾವು ನನ್ನನ್ನು ಅಪ್ಪಿಕೊಂಡಾಗಲೂ ಎಲ್ರೂ ಎಂಥಾ ಸಾವು ಅನ್ನಬೇಕೇ ಹೊರತು. ಇದೆಂಥಾ ಸಾವು ಅನ್ನಬಾರದು ಅಷ್ಟೆ, ಅಲ್ಲಿಯವರೆಗೆ ನನ್ನ ಬಗಲಲ್ಲೇ ಸಾವು ಕಟ್ಟಿಕೊಂಡು ಓಡಾಡುತ್ತಿದ್ದೇನಂತ ಯಾರಿಗೂ ಗೊತ್ತಾಗೋದು ಬೇಡ. ಇಷ್ಟೆ ಚಿನ್ನಾ...
ಎಲ್ಲೇ ಇರು ಚೆನ್ನಾಗಿರು, ನಿನ್ನ ನಗುವನ್ನೇ ಬಯಸುವ ನೀ ಮರೆತ ಹುಡುಗ -ಇಂತಿ ನಿನ್ನ ಪ್ರೀತಿಯ

Sunday, August 3, 2008

Blogger Buzz: You Are Not Spam

Blogger Buzz: You Are Not Spam

ಮರೆಗುಳಿ ಪತ್ರಕರ್ತರು!

ಹಳೆಯದನ್ನು ಜನಮಾತ್ರ ಅಲ್ಲ ಮಾಧ್ಯಮದವರೂ ಮರೆಯೋದರಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ ಕೇಳಿ...
ಬಿಜೆಪಿ ಸಂಪುಟದಲ್ಲೀಗ ಸಚಿವರಾಗಿರುವ ಡಿ.ಸುಧಾಕರ್ ವಿರುದ್ಧ ಕಳೆದ ಚುನಾವಣೆ ವೇಳೆ ಹಣ,ಹೆಂಡ ಹಂಚಿದ ದೂರುಗಳಿತ್ತು.ಇದನ್ನು ಸುದ್ದಿ ಮಾಡಲು ಹೊರಟ ಟಿವಿ, ಪತ್ರಿಕಾ ವರದಿಗಾರರಿಬ್ಬರನ್ನು ಸಚಿವ ಹಾಗೂ ಅವರ ಬೆಂಬಲಿಗರು ಕೂಡಿ ಹಾಕಿ ಜೀವ ಬೆದರಿಕೆ ಹಾಕಿದ್ದರು.ಸಾಲದ್ದಕ್ಕೆ ದಾಖಲೆಗಳಿದ್ದ ಕ್ಯಾಸೆಟನ್ನೂ ಕ್ಯಾಮೆರಾಮೆನ್ ಕೈಯಿಂದ ಬಲವಂತವಾಗಿ ಕಿತ್ತುಕೊಂಡಿದ್ದರು.ಈ ಸಂಬಂಧ ಸುಧಾಕರ್ ವಿರುದ್ಧ ಹಿರಿಯೂರು ಠಾಣೆಯಲ್ಲಿ ದೂರೂ ದಾಖಲಾಗಿತ್ತು.ಆದರೆ, ನಂತರ ಅವರು ಶಾಸಕರಾಗಿ ಆಯ್ಕೆಯಾದರು.ಅದೃಷ್ಟ ನೆಟ್ಟಗಿತ್ತು ನೋಡಿ ಸಚಿವರೂ ಆದರು.
ಮೊನ್ನೆ, ಮೊನ್ನೆ ಚಳ್ಳಕೆರೆಯಲ್ಲಿ ನಡೆದ ಪತ್ರಿಕಾ ದಿನಾಚರಣೆಗೆ ಇದೇ ಸುಧಾಕರ್ ಅವರನ್ನು ಮುಖ್ಯಅತಿಥಿಯಾಗಿ ಕರೆದ ಪತ್ರಕರ್ತರು ಅವರಿಂದ ಪತ್ರಕರ್ತರು ಹೇಗಿರಬೇಕೆಂಬ ಪಾಠ ಕೂಡ ಹೇಳಿಸಿಕೊಂಡರು.
ಸಚಿವರನ್ನು ಕರೆಯುವುದು ತಪ್ಪಲ್ಲ. ಆದರೆ, ಪತ್ರಕರ್ತರಿಗೇ ಧಮಕಿ ಹಾಕಿದವರನ್ನಾ...

Saturday, August 2, 2008

ಆಕೆ ಪ್ರಧಾನಿಯಾಗದಿದ್ದುದೇ ಒಳ್ಳೆಯದಾಯ್ತು

ಹೌದು. ಈ ಮಾತನ್ನು ಯಾವುದೇ ಪೂರ್ವಾಗ್ರಹ ಇಟ್ಟುಕೊಂಡು ಹೇಳುತ್ತಿಲ್ಲ. ದೇಶದ ಹಿತದೃಷ್ಟಿಯಿಂದ ಹೇಳುತ್ತಿದ್ದೇನಷ್ಟೆ.
ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಇಡೀ ದೇಶದ ದಲಿತರು, ಶೋಷಿತರು ಹೆಮ್ಮೆ ಪಟ್ಟುಕೊಂಡಿದ್ದರು. ಮೇಲ್ಮಧ್ಯಮ ವರ್ಗದ ಆಡೊಂಬಲವಾಗಿರುವ ಉತ್ತರ ಪ್ರದೇಶದಲ್ಲಿ ದಲಿತೆಯೊಬ್ಬಳು ಅದರಲ್ಲೂ ಮಹಿಳೆಯೊಬ್ಬಳು ಮುಖ್ಯಮಂತ್ರಿಯಾಗುವುದು ದೇಶದ ಇತಿಹಾಸದಲ್ಲಿ ದೊಡ್ಡ ಸಾಹಸವೇ ಸರಿ. ಇತಿಹಾಸದುದ್ದಕ್ಕೂ ದಲಿತ ವಿರೋಧಿಯಾಗಿಯೇ ಇದ್ದ ಬ್ರಾಹ್ಮಣರನ್ನು ಬಗಲಲ್ಲಿಟ್ಟುಕೊಂಡು ಅಧಿಕಾರ ನಡೆಸುವುದೆಂದರೆ ಸುಲಭದ ವಿಚಾರವಲ್ಲ. ಆದರೆ, ಮೊನ್ನೆ ಮೊನ್ನೆ ಎಡಪಕ್ಷಗಳ ಜತೆ ಸೇರಿಕೊಂಡು ಪ್ರಧಾನಿ ಕುರ್ಚಿಯಲಿ ಕೂರುವ ಕನಸು ಕಾಣುವ ಭರದಲ್ಲಿ ಆಕೆ ನೀಡಿದ ಹೇಳಿಕೆಗಳಿವೆಯಲ್ಲಾ ಅವು ದೇಶವಾಸಿಗಳು ಆಕೆ ಮೇಲಿಟ್ಟದ್ದ ಭರವಸೆಗಳನ್ನೆಲ್ಲಾ ತಲೆಕೆಳಗೆ ಮಾಡಿದವು.
ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕು ಇನ್ನೇನು ಮುಳುಗಿಯೇ ಹೋದಳು ಎನ್ನುವಾಗ ಫೀನಿಕ್ಸ್‌ನಂತೆ ಎದ್ದು ಬಂದ ಆಕೆಯನ್ನು ಅದೆಷ್ಟೋ ಶೋಷಿತ ಮುಖಂಡರಿಗೆ ದೇವತೆಯಾಗಿ, ಬೆಹನ್‌ಜೀಯಾಗಿ ಕಂಡರು. ಆದರೆ, ಅಣುಒಪ್ಪಂದದ ಎಬಿಸಿಡಿ ಅರಿಯದೆ ಆಕೆ ನೀಡಿದ ಬಾಲಿಷ ಹೇಳಿಕೆ ಮಾಧ್ಯಮದ ಮುಂದೆ ನೀಡಿದ ಹೇಳಿಕೆ ಅಧಿಕಾರಕ್ಕಾಗಿ ಅವಳಲ್ಲಿದ್ದ ಅಕಾರ ದಾಹ ಬಯಲು ಮಾಡಿದೆ.
ಅಷ್ಟಕ್ಕೂ ಅಣುಬಂಧ ಮುಸ್ಲಿಂ ವಿರೋಧಿ ಎಂದು ಕೂಗು ಹಾಕಿದ್ದರಿಂದ ಆಕೆ ಸಾಧಿಸ ಹೊರಟಿದ್ದಾದರೂ ಏನು? ಇಷ್ಟೆ. ಓಟಿನ ರಾಜಕಾರಣ. ಅಣುಬಂಧ ಮುಸ್ಲಿಂ ವಿರೋಧಿ ಎಂಬ ವದಂತಿ ಹರಡಿದರೆ ಮುಸ್ಲಿಮರೆಲ್ಲಾ ಯುಪಿಎ ವಿರುದ್ಧ ನಿಂತಾರು ಎಂಬ ಲೆಕ್ಕಾಚಾರ ಆಕೆಯದ್ದು. ಆದರೆ,ಎಲ್ಲಾ ಎಣಿಸಿದಂತೆ ಆಗಬೇಕೆಂಬ ನಿಯಮವೇನಿಲ್ಲವಲ್ಲಾ. ದೇಶದ ಬಹುತೇಕ ಮಂದಿ ಅಣುಬಂಧದ ಪರ ಇರುವಾಗ ಈಕೆ ‘ಧರ್ಮ’ದ ಗೋಡೆ ಕಟ್ಟಲು ಶುರುಮಾಡಿದ್ದು ಬೇಸರದ ಸಂಗತಿ.
ಅಣುಬಂಧ ದೇಶ ಎದುರಿಸುತ್ತಿರುವ ಇಂಧನ ಸಮಸ್ಯೆಗೆ ಪರಿಹಾರವೇ ಹೊರತು, ಯಾವುದೇ ಒಂದು ಧರ್ಮ ವಿರೋಧಿ ಅಲ್ಲ. ಮುಸ್ಲಿಮರಿಗೆ ವಿರುದ್ಧವಾದ ಅಂಶ ಅದರಲ್ಲೆಲ್ಲಿದೆ ಎಂಬುದೇ ಅರ್ಥವಾಗುತ್ತಿಲ್ಲ.
ನಿಜವಾಗಿ ಅಣುಬಂಧದ ಬಿಕ್ಕಟ್ಟಿನಲ್ಲಿ ನಡೆಯಬೇಕಾಗಿದ್ದು,ಭಾರತಕ್ಕೆ ಆ ಒಪ್ಪಂದಿಂದ ಆಗುವ ಲಾಭ ನಷ್ಟಗಳ ಚರ್ಚೆ.ಆದರೆ, ಧರ್ಮವನ್ನು ವಿನಾಕಾರಣ ಎಳೆತರುವ ಮೂಲಕ ನಮ್ಮ ರಾಜಕಾರಣಿಗಳು ತಮಗೆ ಅಧಿಕಾರ ಮುಖ್ಯವೋ,ದೇಶದ ಹಿತ ಮುಖ್ಯವೋ ಎಂಬುದನ್ನು ಜಗಜ್ಜಾಹೀರುಪಡಿಸಿದ್ದಾರೆ. ಪ್ರಾದೇಶಿಕ ಪಕ್ಷಗಳಂತೂ ದೇಶದ ಹಿತ ಮರೆತು ವಸೂಲಿಗಿಳಿದದ್ದು ಪ್ರಜಾಪ್ರಭುತ್ವದ ಅವಹೇಳನ. ಈ ವಿಷಯದಲ್ಲಿ ಆಡಳಿತ ಸರಕಾರದ ನಡೆ ದೇಶದ ಇತಿಹಾಸಕ್ಕೊಂದು ಕಪ್ಪು ಚುಕ್ಕೆ.
ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ
ಅಣುಬಂಧದ ವಿಷಯದಲ್ಲಿ ಇಡೀ ಜಗತ್ತು ನಮ್ಮತ್ತ ಮುಖ ಮಾಡಿತ್ತು. ಆದರೆ, ನಮ್ಮ ರಾಜಕೀಯ ಪಕ್ಷಗಳು ಹಣ, ಅಕಾರಕ್ಕಾಗಿ ಅದನ್ನು ಬಳಸಿಕೊಂಡದ್ದು ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿ.
ಅಷ್ಟಕ್ಕೂ ದೇಶದ ಮೊದಲ ಮುಸ್ಲಿಂ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರೇ ಅಣುಬಂಧದ ಅಗತ್ಯವನ್ನು ಸಾರಿ ಹೇಳುತ್ತಿದ್ದರೆ ಇಲ್ಲಿ ಕಾರಟ್, ಮಾಯಾವತಿಯಂಥವರು ಒಪ್ಪಂದ ಮುಸ್ಲಿಂ ವಿರೋಧಿ ಎಂದು ಬೊಬ್ಬೆ ಹಾಕುತ್ತಿದ್ದರು.
ಮಾಜಿ ಪ್ರಧಾನಿ ದೇವೇಗೌಡರಂತು ಅಣುಬಂಧವನ್ನು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಳಸಿದ್ದು ಅವರ ಘನತೆಗೆ ತಕ್ಕುದಲ್ಲ. ಗೌಡ್ರು ಹೆಚ್ಚು ದಿನ ಪ್ರಧಾನಿ ಪಟ್ಟದಲ್ಲಿ ಉಳಿಯದಿದ್ದುದೇ ದೇಶದ ಜನರ ಸುದೈವ.
-ಎಕೆ