Saturday, August 2, 2008

ಆಕೆ ಪ್ರಧಾನಿಯಾಗದಿದ್ದುದೇ ಒಳ್ಳೆಯದಾಯ್ತು

ಹೌದು. ಈ ಮಾತನ್ನು ಯಾವುದೇ ಪೂರ್ವಾಗ್ರಹ ಇಟ್ಟುಕೊಂಡು ಹೇಳುತ್ತಿಲ್ಲ. ದೇಶದ ಹಿತದೃಷ್ಟಿಯಿಂದ ಹೇಳುತ್ತಿದ್ದೇನಷ್ಟೆ.
ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಇಡೀ ದೇಶದ ದಲಿತರು, ಶೋಷಿತರು ಹೆಮ್ಮೆ ಪಟ್ಟುಕೊಂಡಿದ್ದರು. ಮೇಲ್ಮಧ್ಯಮ ವರ್ಗದ ಆಡೊಂಬಲವಾಗಿರುವ ಉತ್ತರ ಪ್ರದೇಶದಲ್ಲಿ ದಲಿತೆಯೊಬ್ಬಳು ಅದರಲ್ಲೂ ಮಹಿಳೆಯೊಬ್ಬಳು ಮುಖ್ಯಮಂತ್ರಿಯಾಗುವುದು ದೇಶದ ಇತಿಹಾಸದಲ್ಲಿ ದೊಡ್ಡ ಸಾಹಸವೇ ಸರಿ. ಇತಿಹಾಸದುದ್ದಕ್ಕೂ ದಲಿತ ವಿರೋಧಿಯಾಗಿಯೇ ಇದ್ದ ಬ್ರಾಹ್ಮಣರನ್ನು ಬಗಲಲ್ಲಿಟ್ಟುಕೊಂಡು ಅಧಿಕಾರ ನಡೆಸುವುದೆಂದರೆ ಸುಲಭದ ವಿಚಾರವಲ್ಲ. ಆದರೆ, ಮೊನ್ನೆ ಮೊನ್ನೆ ಎಡಪಕ್ಷಗಳ ಜತೆ ಸೇರಿಕೊಂಡು ಪ್ರಧಾನಿ ಕುರ್ಚಿಯಲಿ ಕೂರುವ ಕನಸು ಕಾಣುವ ಭರದಲ್ಲಿ ಆಕೆ ನೀಡಿದ ಹೇಳಿಕೆಗಳಿವೆಯಲ್ಲಾ ಅವು ದೇಶವಾಸಿಗಳು ಆಕೆ ಮೇಲಿಟ್ಟದ್ದ ಭರವಸೆಗಳನ್ನೆಲ್ಲಾ ತಲೆಕೆಳಗೆ ಮಾಡಿದವು.
ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕು ಇನ್ನೇನು ಮುಳುಗಿಯೇ ಹೋದಳು ಎನ್ನುವಾಗ ಫೀನಿಕ್ಸ್‌ನಂತೆ ಎದ್ದು ಬಂದ ಆಕೆಯನ್ನು ಅದೆಷ್ಟೋ ಶೋಷಿತ ಮುಖಂಡರಿಗೆ ದೇವತೆಯಾಗಿ, ಬೆಹನ್‌ಜೀಯಾಗಿ ಕಂಡರು. ಆದರೆ, ಅಣುಒಪ್ಪಂದದ ಎಬಿಸಿಡಿ ಅರಿಯದೆ ಆಕೆ ನೀಡಿದ ಬಾಲಿಷ ಹೇಳಿಕೆ ಮಾಧ್ಯಮದ ಮುಂದೆ ನೀಡಿದ ಹೇಳಿಕೆ ಅಧಿಕಾರಕ್ಕಾಗಿ ಅವಳಲ್ಲಿದ್ದ ಅಕಾರ ದಾಹ ಬಯಲು ಮಾಡಿದೆ.
ಅಷ್ಟಕ್ಕೂ ಅಣುಬಂಧ ಮುಸ್ಲಿಂ ವಿರೋಧಿ ಎಂದು ಕೂಗು ಹಾಕಿದ್ದರಿಂದ ಆಕೆ ಸಾಧಿಸ ಹೊರಟಿದ್ದಾದರೂ ಏನು? ಇಷ್ಟೆ. ಓಟಿನ ರಾಜಕಾರಣ. ಅಣುಬಂಧ ಮುಸ್ಲಿಂ ವಿರೋಧಿ ಎಂಬ ವದಂತಿ ಹರಡಿದರೆ ಮುಸ್ಲಿಮರೆಲ್ಲಾ ಯುಪಿಎ ವಿರುದ್ಧ ನಿಂತಾರು ಎಂಬ ಲೆಕ್ಕಾಚಾರ ಆಕೆಯದ್ದು. ಆದರೆ,ಎಲ್ಲಾ ಎಣಿಸಿದಂತೆ ಆಗಬೇಕೆಂಬ ನಿಯಮವೇನಿಲ್ಲವಲ್ಲಾ. ದೇಶದ ಬಹುತೇಕ ಮಂದಿ ಅಣುಬಂಧದ ಪರ ಇರುವಾಗ ಈಕೆ ‘ಧರ್ಮ’ದ ಗೋಡೆ ಕಟ್ಟಲು ಶುರುಮಾಡಿದ್ದು ಬೇಸರದ ಸಂಗತಿ.
ಅಣುಬಂಧ ದೇಶ ಎದುರಿಸುತ್ತಿರುವ ಇಂಧನ ಸಮಸ್ಯೆಗೆ ಪರಿಹಾರವೇ ಹೊರತು, ಯಾವುದೇ ಒಂದು ಧರ್ಮ ವಿರೋಧಿ ಅಲ್ಲ. ಮುಸ್ಲಿಮರಿಗೆ ವಿರುದ್ಧವಾದ ಅಂಶ ಅದರಲ್ಲೆಲ್ಲಿದೆ ಎಂಬುದೇ ಅರ್ಥವಾಗುತ್ತಿಲ್ಲ.
ನಿಜವಾಗಿ ಅಣುಬಂಧದ ಬಿಕ್ಕಟ್ಟಿನಲ್ಲಿ ನಡೆಯಬೇಕಾಗಿದ್ದು,ಭಾರತಕ್ಕೆ ಆ ಒಪ್ಪಂದಿಂದ ಆಗುವ ಲಾಭ ನಷ್ಟಗಳ ಚರ್ಚೆ.ಆದರೆ, ಧರ್ಮವನ್ನು ವಿನಾಕಾರಣ ಎಳೆತರುವ ಮೂಲಕ ನಮ್ಮ ರಾಜಕಾರಣಿಗಳು ತಮಗೆ ಅಧಿಕಾರ ಮುಖ್ಯವೋ,ದೇಶದ ಹಿತ ಮುಖ್ಯವೋ ಎಂಬುದನ್ನು ಜಗಜ್ಜಾಹೀರುಪಡಿಸಿದ್ದಾರೆ. ಪ್ರಾದೇಶಿಕ ಪಕ್ಷಗಳಂತೂ ದೇಶದ ಹಿತ ಮರೆತು ವಸೂಲಿಗಿಳಿದದ್ದು ಪ್ರಜಾಪ್ರಭುತ್ವದ ಅವಹೇಳನ. ಈ ವಿಷಯದಲ್ಲಿ ಆಡಳಿತ ಸರಕಾರದ ನಡೆ ದೇಶದ ಇತಿಹಾಸಕ್ಕೊಂದು ಕಪ್ಪು ಚುಕ್ಕೆ.
ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ
ಅಣುಬಂಧದ ವಿಷಯದಲ್ಲಿ ಇಡೀ ಜಗತ್ತು ನಮ್ಮತ್ತ ಮುಖ ಮಾಡಿತ್ತು. ಆದರೆ, ನಮ್ಮ ರಾಜಕೀಯ ಪಕ್ಷಗಳು ಹಣ, ಅಕಾರಕ್ಕಾಗಿ ಅದನ್ನು ಬಳಸಿಕೊಂಡದ್ದು ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿ.
ಅಷ್ಟಕ್ಕೂ ದೇಶದ ಮೊದಲ ಮುಸ್ಲಿಂ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರೇ ಅಣುಬಂಧದ ಅಗತ್ಯವನ್ನು ಸಾರಿ ಹೇಳುತ್ತಿದ್ದರೆ ಇಲ್ಲಿ ಕಾರಟ್, ಮಾಯಾವತಿಯಂಥವರು ಒಪ್ಪಂದ ಮುಸ್ಲಿಂ ವಿರೋಧಿ ಎಂದು ಬೊಬ್ಬೆ ಹಾಕುತ್ತಿದ್ದರು.
ಮಾಜಿ ಪ್ರಧಾನಿ ದೇವೇಗೌಡರಂತು ಅಣುಬಂಧವನ್ನು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಳಸಿದ್ದು ಅವರ ಘನತೆಗೆ ತಕ್ಕುದಲ್ಲ. ಗೌಡ್ರು ಹೆಚ್ಚು ದಿನ ಪ್ರಧಾನಿ ಪಟ್ಟದಲ್ಲಿ ಉಳಿಯದಿದ್ದುದೇ ದೇಶದ ಜನರ ಸುದೈವ.
-ಎಕೆ

No comments: