Wednesday, August 13, 2008

ಇವರು ಗೆಲ್ಲುವ ಕುದುರೆ ಬೆನ್ನುತಟ್ಟುವವರು

ಬೀಜಿಂಗ್ ಒಲಂಪಿಕ್ಸ್‌ನಲ್ಲಿ ಚಿನ್ನ ತಂದುಕೊಟ್ಟು ಇಡೀ ದೇಶವನ್ನೇ ಸಂಭ್ರಮದಲ್ಲಿ ತೇಲಿಸಿದ ಬಿಂದ್ರಾಸಾಧನೆ ನಿಜಕ್ಕೂ ಶ್ಲಾಘನೀಯ ನೂರು ಕೋಟಿ ಜನಸಂಖ್ಯೆಯ ಭಾರತಕ್ಕೆ ಒಲಂಪಿಕ್ಸ್‌ನಲ್ಲಿ ಕಾಡುತ್ತಿದ್ದ ಚಿನ್ನದ ಬರ ಕೊನೆಗೂ ಬಿಂದ್ರಾ ಅವರಿಂದ ಕೊನೆಗೊಂಡಿದೆ. ಇವರ ಈ ಸಾಧನೆಗೆ ಭಾರತದ ಪ್ರತಿಯೊಬ್ಬ ಕ್ರೀಡಾಸಕ್ತರೂ ಗೌರವ ಸಲ್ಲಿಸಲೇಬೇಕು. ಸಲ್ಲಿಸಿದ್ದಾರೆ ಕೂಡ.
ಚೀನಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಬಿಂದ್ರಾ ಸಾಧನೆ ಮೆಚ್ಚಿ ದೇಶದ ನಾನಾ ರಾಜ್ಯಗಳು ಬಹುಮಾನ ಘೋಷಿಸಿವೆ. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿಲ್ಲ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ೧೦ಲಕ್ಷ ಬಹುಮಾನ ಪ್ರಕಟಿಸಿ ತಮ್ಮ ಕ್ರೀಡಾ ಸೂರ್ತಿ ಮೆರೆದಿದ್ದಾರೆ.
ಈ ಸುದ್ದಿ ಮರುದಿನ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗುವ ಹೊತ್ತಿಗೆ ವಾಣಿಜ್ಯ ನಗರಿ ದಾವಣಗೆರೆಯ ಪತ್ರಿಕಾಭವನದಲ್ಲಿ ಏಷ್ಯನ್ ಕ್ರೆಡಿಟ್ ಕರಾಟೆ ಚಾಂಪಿಯನ್‌ಷಿಪ್‌ಗೆ ಆಯ್ಕೆ ಆಗಿರುವ ಐ.ಕೆ.ಹೀನಾಎಂಬ ಹುಡುಗಿ ಕ್ರೀಡಾಭಿಮಾನಿಗಳ ಸಹಾಯಕ್ಕಾಗಿ ಎದುರುನೋಡುತ್ತಿದ್ದಳು. ಮಲೇಷ್ಯಾದಲ್ಲಿ ನಡೆಯಲಿರುವ ಈ ಸರ್ದೆಯಲ್ಲಿ ಭಾಗವಹಿಸಲು ಕನಿಷ್ಠ ಅಂದ್ರೂ ೧.೨೫ ಲಕ್ಷ ರೂ. ಖರ್ಚು ತಗಲುತ್ತದೆ. ಅಷ್ಟು ವೆಚ್ಚ ಮಾಡಿ ಸರ್ದೆಯಲ್ಲಿ ಪಾಲ್ಗೊಳ್ಳುವ ಶಕ್ತಿ ಅವಳಲ್ಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಆಕೆ ಮಾಧ್ಯಮದ ಮುಂದೆ ಬರಬೇಕಾಯಿತು. ಕಳೆದ ವರ್ಷ ಇದೇ ಜಿಲ್ಲೆಯಿಂದ ಟರ್ಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದ ರೇಖಾರೆಡ್ಡಿ ಗೋಳು ಇದಕ್ಕಿಂತ ಭಿನ್ನವಾಗಿರಲಿಲ್ಲ.‘ಸರಕಾರ ಸ್ಪರ್ಧೆಗೇನೂ ಆಯ್ಕೆ ಮಾಡಿಕಳುಹಿಸುತ್ತದೆ. ಆದರೆ, ಹಣಕಾಸು ಸಹಕಾರ ನೀಡುವುದಿಲ್ಲ. ಹೀಗಾದರೆ ನಮ್ಮಂಥ ಮಧ್ಯಮವರ್ಗವರು ಕ್ರೀಡೆಯಲ್ಲಿ ಮುಂದೆ ಬರುವುದಾದರೂ ಹೇಗೆ ಎಂದು ಆಕೆ ತನ್ನ ಅಸಮಾಧಾನ ತೋಡಿಕೊಂಡಿದ್ದಳು. ಈಗ ಗೋಗರೆಯುವ ಸರದಿ ಹೀನಾಳದ್ದು ಅಷ್ಟೆ. ಇದು ನಿಲ್ಲುವ ಹಾಗೆ ಕಾಣುವುದಿಲ್ಲ.
ಹೀನಾ ಪ್ರಥಮ ಪಿಯು ವಿದ್ಯಾರ್ಥಿನಿ. ರಾಜ್ಯ,ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ ಬಾಚಿಕೊಂಡಿರುವ ಹೀನಾಗೆ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಅರ್ಹವಾಗಿಯೇ ದಕ್ಕಿದೆ. ಆದರೆ, ಮಲೇಷ್ಯಾಕ್ಕೆ ಹೋಗಬೇಕಾದರೆ ಪಾಸ್‌ಫೋರ್ಟ್,ಕೋಚ್ ಅದೂ ಇದೂ ಅಂದ್ರೂ ಆರಂಕಿ ದಾಟುವ ಖರ್ಚು ಭರಿಸುವುದು ಸಾಧ್ಯವೆ?
ಬಿಂದ್ರಾಗೆ ೧೦ ಲಕ್ಷ ರೂ. ಘೋಷಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕ್ರೀಡಾಸೂರ್ತಿ ಮೆರೆದಿದ್ದಾರೆ ನಿಜ. ಆದರೆ, ಅದೇ ಸ್ಪೂರ್ತಿ ಹಣವಿಲ್ಲದೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವ ರಾಜ್ಯದ ನೂರಾರು ಪ್ರತಿಭಾವಂತ ಕ್ರೀಡಾಪಟುಗಳ ವಿಷಯದಲ್ಲಿ ಯಾಕೆ ಕಾಣಿಸಿಕೊಳ್ಳುವುದಿಲ್ಲ.
ಗೆಲ್ಲುವ ಕುದುರೆ ಬೆನ್ನು ತಟ್ಟುವವರು ನೂರಾರು ಜನ ಸಿಗುತ್ತಾರೆ? ಆದ್ರೆ...

No comments: