Friday, August 22, 2008

ಐ ಲವ್ ಟು ವಾಕ್ ಇನ್ ದಿ ರೈನ್

ಐ ಲವ್ ಟು ವಾಕ್ ಇನ್ ದಿ ರೈನ್ ಬಿಕಾಸ್ ನೋಬಡಿ ಕ್ಯಾನ್ ಸೀ ಮಿ ಕ್ರೈಯಿಂಗ್‘ - ಚಾರ್ಲಿ ಚಾಪ್ಲಿನ್
ಎಷ್ಟು ಅದ್ಭುತವಾಗಿದೆಯಲ್ಲಾ ಈ ಸಾಲು. ಚಾಪ್ಲಿನ್ ಎಂಬ ಸಿನಿಮಾಂತ್ರಿಕ ನಗುನಗುತ್ತಲೇ ಜನರ ಹೃದಯ ತಲಪಿದವನು. ನಗುತ್ತಲೇ ನೋವು ಬಿಚ್ಚಿಟ್ಟವನು.
ಸಮಾಜ, ಕೈಗಾರಿಕೀಕರಣ, ಆಸೆ ಇವುಗಳನ್ನೆಲ್ಲಾ ವಿಡಂಬನೆ ಮಾಡುತ್ತಲೇ ಅದರಿಂದಾಗುವ ಅನಾಹುತ, ನೋವಿನ ಪರಿಚಯ ಮಾಡಿಕೊಟ್ಟ ಚಾಪ್ಲಿನ್ ನನಗಂತೂ ಅದ್ಭುತ ವ್ಯಕ್ತಿ. ಅವನು ನೆನಪಾದಗಲೆಲ್ಲಾ ನನ್ನ ಮುಂದೆ ಬರುವುದೇ ಈ ಸಾಲು.
ನಮ್ಮ ನಡುವೆ ಎರಡು ರೀತಿಯ ಜನರಿರುತ್ತಾರೆ. ಕೆಲವರು ಸಣ್ಣ ನೋವಿಗೂ ನಾಲ್ಕು ಕಣ್ಣೀರು ಹಾಕಿ,ಆತ್ಮೀಯರ ಹೆಗಲ ಮೇಲೆ ತಲೆ ಇಟ್ಟು ಒಂದಷ್ಟು ಸಮಯ ಕಣ್ಣು ಮುಚ್ಚಿಕೊಂಡು ಹಗುರವಾಗುವವರು.ಇನ್ನು ಕೆಲವರಿರುತ್ತಾರೆ. ಅವರಿಗೆ ಖುಷಿಯನ್ನಷ್ಟೇ ಹಂಚಿಗೊತ್ತು.ನೋವನ್ನು ಅವಡುಗಚ್ಚಿ ನುಂಗಿ ಜಗತ್ತಿನ ಮುಂದೆ ನಗುವಿನ ಮುಖವಾಡ ಹಾಕಿಕೊಳ್ಳುವ ಜಾಯಮಾನ ಇವರದ್ದು.
ಮೊದಲ ಗುಂಪಿಗೆ ಸೇರಿದವರು ಪುಣ್ಯವಂತರು ಅನ್ನಲೇ ಬೇಕು. ನೋವು ಹಂಚಿಕೊಳ್ಳಲು ಯಾರಾದರೂ ಅವರ ಪಕ್ಕಕ್ಕಿರುತ್ತಾರೆ. ಇನ್ನು ಕೆಲವರಿಗೆ ಆ ಭಾಗ್ಯ ಇಲ್ಲ. ತಮ್ಮ ನೋವನ್ನು ಹೇಳಿಕೊಂಡು ಬಯಲಾಗುವಷ್ಟು ಆತ್ಮೀಯರು ಅವರಿಗಿರುವುದಿಲ್ಲ ಅಥವಾ ಅವರಿಗೆ ತಮ್ಮ ನೋವು ಹಂಚಿಕೊಳ್ಳುವ ಇಷ್ಟ ಇರುವುದಿಲ್ಲ. ಈ ಗುಂಪಿಗೆ ಸೇರಿದವರಿಗಷ್ಟೇ ಗೊತ್ತು ಮೇಲಿನ ಸಾಲಿನ ಮಹತ್ವ.

No comments: